ಸು. 1410-63. ವಿಜಯನಗರದ ಪ್ರೌಢದೇವರಾಯನ (1424-46) ಆಶ್ರಯದಲ್ಲಿದ್ದ ದಂಡನಾಯಕ ಹಾಗೂ ಪ್ರಾಂತಾಧಿಕಾರಿ. ಶಿವತತ್ತ್ವ ಚಿಂತಾಮಣಿ ಎಂಬ ಗ್ರಂಥದ ಕರ್ತೃ. ಇವನಿಗೆ ಲಕ್ಕಣ್ಣನಾಯಕ, ಲಕ್ಕಣಾಮಾತ್ಯ, ಲಕ್ಕಮಂತ್ರಧರ, ಲಕ್ಕಣ್ಣವೊಡೆಯ, ಲಕ್ಕಣ್ಣದಣ್ಣಾಯಕ ಎಂಬ ಬೇರೆ ಬೇರೆ ಹೆಸರುಗಳಿದ್ದಂತೆ ಶಾಸನಗಳಿಂದ ತಿಳಿದುಬರುತ್ತದೆ. ಇವನ ತಂದೆ ಹೆಗ್ಗಡೆದೇವ, ತಾಯಿ ಒಮ್ಮಾಯಮ್ಮ, ಸಹೋದರ ಮಾದಣ್ಣ. ಹೊಸಪಟ್ಟಣ (ಮುಳಬಾಗಲು ತಾಲ್ಲೂಕಿನ ವಿರೂಪಾಕ್ಷಪುರ) ಇವನ ಜನ್ಮಸ್ಥಳವೆಂದು ತೋರುತ್ತದೆ.

ಲಕ್ಕಣ್ಣದಂಡೇಶ ತನ್ನ ಗ್ರಂಥದಲ್ಲಿ ಧರೆಗಧಿಕ ಮೂರುರಾಯರಗಂಡನ ಪ್ರತಿಮಬಿರುದಂಕ ಗಜವೇಂಟೆಕಾರ ದೇವೇಂದ್ರಭೂವರನಮಹದೈಶ್ವರ್ಯ ಶರಧಿ ಚಂದ್ರೋದಯನುದಾರಕರುಣಾಧಾರ, ಧರಣೀಶ ದೇವರಾಜೇಂದ್ರನ ಮಹೈಶ್ವರ್ಯ ಶರಧಿವರ್ಧನ ಕಳಾಧರ, ಇಭಬೇಂಟೆಕಾರ ದೇವೇಂದ್ರನುನ್ನತ ಕಳೆಯ, ಪ್ರೌಢಮತಿ ದೇವರಾಜೇಂದ್ರನ ಮಹಾಪ್ರಧಾನಂ ಎಂದು ಹೇಳಿ ಕೊಂಡಿದ್ದಾನೆ. ಅಲ್ಲದೆ ತನ್ನನ್ನು ಕೀರ್ತಿಯುತ, ಸಕಲಸಜ್ಜನ ಕಲ್ಪತರು, ಕರುಣಾಳು, ಲೋಕೈಕ ಬಂಧು ಮುಂತಾಗಿ ವಿಶೇಷಿಸಿಕೊಂಡಿದ್ದಾನೆ.  ಇದುವರೆಗೆ ಇವನ ವಿಚಾರವಾಗಿ ಕೋಲಾರ, ಮಂಡ್ಯ, ಚಿತ್ರದುರ್ಗ, ಬೆಂಗಳೂರು, ತಿರುಚಿನಾಪಲ್ಲಿ, ತಂಜಾವೂರು, ದಕ್ಷಿಣ ಕನ್ನಡ, ಸೇಲಂ ಜೆಲ್ಲೆಗಳಲ್ಲಿ ಒಟ್ಟು ಹದಿನೇಳು ಶಾಸನಗಳು ದೊರೆತಿವೆ. ಇವು 1410-63ರ ಅವಧಿಯವು.

ದೇವರಾಯನಲ್ಲಿ ಈತ ಮೊದಲಿಗೆ ಮಾಂಡಲಿಕನಾಗಿದ್ದು ಬಳಿಕ ಸೇನಾನಿಯಾಗಿ ಅನಂತರ ಮಹಾಮಂತ್ರಿಯಾದ. ದಕ್ಷಿಣ ದೇಶದ ಪ್ರಾಂತ ಗಳಲ್ಲಿ ದಂಗೆಕೋರರ ಉಪಟಳವನ್ನು ಅಡಗಿಸಿ, ಅಲ್ಲಿಯ ಆಡಳಿತವನ್ನು ಸುವ್ಯವಸ್ಥೆಗೊಳಿಸಿ, ಸಾಮ್ರಾಜ್ಯದ ವ್ಯವಹಾರಗಳನ್ನು ಬಹು ದಕ್ಷತೆ ಯಿಂದಲೂ ನಿಷ್ಠೆಯಿಂದಲೂ ನಿರ್ವಹಿಸಿದ. ಪ್ರೌಢದೇವರಾಯ ಇವನ ಕಾರ್ಯದಕ್ಷತೆಗೆ ಮೆಚ್ಚಿ ದಕ್ಷಿಣಪ್ರಾಂತದ ಆಡಳಿತವನ್ನೆಲ್ಲ ಇವನಿಗೇ ವಹಿಸಿದ್ದ.  1430-40ರ ವರೆಗೆ ಟೇಕಲ್, ಮುಳಬಾಗಲು, ತುಂಡೀರ, ಬಾರಕೂರು ಮೊದಲಾದ ಪ್ರಾಂತಗಳಿಗೆ ಮಾಂಡಲಿಕನಾಗಿದ್ದ. 1440ರ ಅನಂತರ ಪುನಃ ಮಧುರೆಗೆ ಮಾಂಡಲಿಕನಾಗಿ ಬಳಿಕ ರಾಜಪ್ರತಿನಿಧಿಯೂ ಆದ. 1431ರಲ್ಲಿ ಪಾಂಡ್ಯ ರಾಜ್ಯದ ಮೇಲೆ ದಂಡೆತ್ತಿ ಹೋಗಿ ಅಲ್ಲಿಯ ಅರಸರನ್ನು ವಶಪಡಿಸಿಕೊಂಡು ರಾಜಪ್ರತಿನಿಧಿಯಾಗಿ ರಾಜ್ಯಭಾರವನ್ನು ವಹಿಸಿಕೊಂಡ.

ಆ ಕಾಲದಲ್ಲಿ ಈತ ತನ್ನ ಹೆಸರಿರುವ ನಾಣ್ಯಗಳನ್ನು ಅಚ್ಚು ಹಾಕಿಸಿ ತಿರುಚ್ಚಿರಾಪ್ಪಳ್ಳಿ, ತಂಜಾವೂರು ಈ ಪ್ರಾಂತಗಳಲ್ಲಿ ಅವನ್ನು ಪ್ರಚಾರಕ್ಕೆ ತಂದ. ಇವನ ನಾಣ್ಯಗಳಲ್ಲಿ ಒಂದು ಮುಖದಲ್ಲಿ ಆನೆಯ ಚಿಹ್ನೆ ಮತ್ತೊಂದು ಮುಖದಲ್ಲಿ ಲಕುಮಣ ದಣಾಯಕರು ಎಂಬ ಲಿಪಿ ಇರುತ್ತದೆ. ಇವನಿಗೆ ಶ್ರೇಯಸ್ಸನ್ನು ಕೋರಿ 1440ರಲ್ಲಿ ನಾಗರಸ ಎಂಬುವನು ತಿರುವಾರೂರಿನ ದೇವಸ್ಥಾನದ ಗೋಪುರವನ್ನು ಕಟ್ಟಿಸಿಕೊಟ್ಟನೆಂದು ಶಾಸನದ ಉಲ್ಲೇಖವಿದೆ. ಅದೇ ಸುಮಾರಿನಲ್ಲಿ ಸಿಂಹಳ ದ್ವೀಪಕ್ಕೆ ದಂಡಯಾತ್ರೆ ನಡೆಸಿ ಲಂಕೆಯನ್ನು ಗೆದ್ದ. ಬಹುಶಃ ಈ ಸಾಧನೆಯಿಂದ ಇವನಿಗೆ ದಕ್ಷಿಣಸಮುದ್ರಾಧಿಪತಿ ಎಂಬ ಬಿರುದು ಲಭಿಸಿತು. ಸಿಂಹಳೀ ಭಾಷೆಯ ಕಾವ್ಯಗಳಲ್ಲೂ ಕನ್ನಡಿಗರ ಈ ದಿಗ್ವಿಜಯ ಸಂಗತಿಯ ಉಲ್ಲೇಖವಿದೆ. ಸಿಂಹಳ ದಂಡಯಾತ್ರೆಯ ಅನಂತರ ದೊರೆ ದೇವರಾಯನಿಗೆ ಅಲಾಉದ್ದೀನ ನಿಂದ ಒದಗಿದ ಕಿರುಕುಳವನ್ನು ತಪ್ಪಿಸಲು ಬಹಮನೀ ರಾಜ್ಯದಲ್ಲಿ ನುಗ್ಗಿ ಕಲ್ಬುರ್ಗಿ ಪ್ರಾಂತವನ್ನು ಕೊಳ್ಳೆಹೊಡೆದು ರಣಾಂಗಣದಲ್ಲಿ ಕಲಿವೀರಭದ್ರನಾಗಿ ಕಾದಾಡಿ ತುರುಷ್ಕ ಸೇನೆಯನ್ನು ಹಾಳುಮಾಡಿ ವಿಜಯ ಸಾಧಿಸಿದ ಲಕ್ಕಣ್ಣ ದಂಡೇಶನ ಪರಾಕ್ರಮವನ್ನು ಸಿದ್ಧನಂಜೇಶ ತನ್ನ ಕಾವ್ಯದಲ್ಲಿ ಕೀತ್ರ್ಯಂಗನೆಯ ತೋಳೊಳೊರಗಿರುವ ಪ್ರೌಢನರೇಂದ್ರನು ರುದಂಡನಾಯಕಂ ಹರಭಕ್ತ ಲಕ್ಕಣಾಮಾತ್ಯರ್ ಎಂದು ಪ್ರಶಂಸಿಸಿದ್ದಾನೆ. ಪರ್ಷಿಯ ದೇಶದ ರಾಯಭಾರಿ ಅಬ್ದುಲ್ ರಜಾಕ್ ಇವನ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾನೆ.

ಲಕ್ಕಣ್ಣದಂಡೇಶ ಸಂಸ್ಕøತ ಮತ್ತು ಕನ್ನಡ ಈ ಎರಡು ಭಾಷೆಗಳಲ್ಲಿಯೂ ದೊಡ್ಡ ವಿದ್ವಾಂಸನಾಗಿದ್ದ. ಇವನು ಕೈಗೊಂಡ ಸಾಹಿತ್ಯ ಮತ್ತು ಸಂಸ್ಕøತಿ ಸಂವರ್ಧನಕಾರ್ಯ ರಾಜಕಾರ್ಯದಷ್ಟೇ ಮಹತ್ತ್ವವುಳ್ಳದ್ದು. ಈತ ವೀರಶೈವ ಸಂಸ್ಕøತಿ ನಾಡಿನ ಮೂಲೆ ಮೂಲೆಗಳಲ್ಲಿಯೂ ಹರಡುವಂತೆ ಜನಜಾಗೃತಿ ಯನ್ನುಂಟುಮಾಡಿದ ಮಹಾವ್ಯಕ್ತಿ.   	
(ಎಸ್.ಬಿ.)
ಈತನ ಶಿವತತ್ತ್ವಚಿಂತಾಮಣಿ ವಾರ್ಧಕ ಷಟ್ಪದಿಯಲ್ಲಿದೆ. ಇದರಲ್ಲಿ 54 ಸಂಧಿಗಳೂ 2,221 ಪದ್ಯಗಳೂ ಇವೆ. ಈ ಕಾವ್ಯ ವೀರಶೈವ ಲಿಂಗತತ್ತ್ವದ ವಿವರಣೆಯೊಂದಿಗೆ ಪ್ರಾರಂಭವಾಗಿ, ಶಿವನ 25 ಲೀಲೆಗಳು, ಬಸವೇಶ್ವರರ ಜನನ, ಬಾಲ್ಯ, ಅಧಿಕಾರಪ್ರಾಪ್ತಿ, ಪವಾಡಗಳು, ಪ್ರಮಥರ ಕಥೆಗಳು, ನೂತನ ಗಣಂಗಳ ಹೆಸರು, ಊರು, ಕಾಯಕಗಳು ನೂರೊಂದು ಸ್ಥಲಗಳು, ಅವುಗಳಲ್ಲಿ ಪ್ರಮುಖವಾದ ಅಷ್ಟಾವರಣ ಷಟ್‍ಸ್ಥಲಗಳ ವಿವರಣೆಯೊಂದಿಗೆ ಲಿಂಗಾಂಗ ಸಾಮರಸ್ಯವನ್ನು ಪ್ರತಿಪಾದಿಸುವುದರ ಮೂಲಕ ಮುಕ್ತಾಯಗೊಂಡಿದ್ದು ವೀರಶೈವ ಧರ್ಮದ ತತ್ತ್ವಕೋಶದಂತಿದೆ. ಇದರ ಪ್ರತಿಪದ್ಯದ ಅಂತ್ಯ ಚರಣಾಂಬುಜಕ್ಕೆ ಶರಣು ಎಂಬ ಅಂಕಿತದಿಂದ ಕೂಡಿರುವುದನ್ನು ನೋಡಿದರೆ ಇದು ದಾಸೋಹಂ ಎಂಬ ಭಕ್ತಿಸಿದ್ಧಾಂತದ ತತ್ತ್ವದಿಂದ ಮೈತುಂಬಿರುವ ಕಾವ್ಯವೆಂದು ಹೇಳಬಹುದು. ಕಾವ್ಯದೃಷ್ಟಿಯಲ್ಲಿ ಇದೊಂದು ಪುರಾಣದಂತಿದ್ದರೂ ಹೊಸ ರೀತಿಯ ವರ್ಣನೆಗಳಿಂದ ಕೃತಿಕಾರ ಒಂದು ಸುಂದರ ಕಾವ್ಯವನ್ನಾಗಿ ಮಾಡಿದ್ದಾನೆ. ಭಕ್ತಿ ರಸದೊಂದಿಗೆ ಉಳಿದ ರಸಗಳು ಪೋಷಕವಾಗಿ ಕಾವ್ಯದ ಸಂಪತ್ತನ್ನು ಹೆಚ್ಚಿಸಿವೆ. ಕಾವ್ಯದ ಪ್ರಧಾನ ಲಕ್ಷ್ಯಮಾನವನನ್ನು ಶಿವಪದದತ್ತ ಸಾಗುವಂತೆ ಮಾಡುವುದು. ಶೈಲಿ ಸರಳವೂ ಸುಂದರವೂ ಆಗಿದೆ. ಸಾವಿರಾರು ಜನ ಶಿವಶರಣರ ಚರಿತೆ ನಿರೂಪಿತವಾಗಿರುವ ಈ ಕಾವ್ಯದಲ್ಲಿ ಐತಿಹಾಸಿಕ ದೃಷ್ಟಿಯಿಂದ ಸಮಕಾಲೀನ ಶರಣರ ಹೆಸರು ಹಾಗೂ ಅವರ ಸ್ಥಳಗಳು ಉಲ್ಲೇಖಿತವಾಗಿದ್ದು ಆ ಮೂಲಕ ತನ್ನ ಮಹತ್ತ್ವವನ್ನು ಹೆಚ್ಚಿಸಿಕೊಂಡಿದೆ. ಇದರಲ್ಲಿ ಉಕ್ತವಾಗಿರುವ ವಿಷಯಗಳು ಆಗಮ ಮತ್ತು ಪುರಾಣಗಳಿಂದ ಆಯ್ದಂಥವು.  ಅಲ್ಲಲ್ಲಿ ಪಾರಸೀಶಬ್ದಗಳ ಪ್ರಯೋಗ ಹಿತಮಿತವಾಗಿದೆ. ಸಂಸ್ಕøತ ಪದಗಳನ್ನು ಛಂದಸ್ಸಿಗೆ ಅನುಕೂಲವಾಗುವಂತೆ ಬಳಸಲಾಗಿದೆ. ನೂತನ ಗಣಂಗಳ ಚರಿತ್ರೆಯನ್ನು ಬರೆದ ವೀರಶೈವ ಕವಿಗಳಲ್ಲಿ ಲಕ್ಕಣ್ಣನೇ ಮೊದಲಿಗ.  ಅನಂತರ ಬಂದ ಗುಬ್ಬಿಯ ಮಲ್ಲಣಾರ್ಯ, ಸಿದ್ಧನಂಜೇಶ ಮೊದಲಾದ ಕವಿಗಳು ಇವನ ಕೃತಿಗೆ ಋಣಿಯಾಗಿದ್ದಾರೆ.
	
(ಪಿ.ಎಮ್‍ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ